ಮುಂಗಭೀರ - 
ಹಿಮಾಲಯಪರ್ವತಶ್ರೇಣಿಯ ಮುಂದುಗಡೆ ಮೆಕ್ಕಲಿನಿಂದ ತುಂಬಿರುವ ಬಹಳ ಆಳವಾದ ಅವನತ ಪ್ರದೇಶ (ಫೋರ್‍ಡೀಪ್). ಹಿಮಾಲಯ ಪರ್ವತ ಶ್ರೇಣಿಯನ್ನೇ ಅನುಸರಿಸಿ ಕಾಶ್ಮೀರದಿಂದ ಅಸ್ಸಾಮ್ ಅರುಣಾಚಲ ಪ್ರದೇಶಗಳವರೆವಿಗೂ 2000 ಕಿಮೀ ಗಿಂತ ಹೆಚ್ಚು ಉದ್ದವಾಗಿ ಇದು ವ್ಯಾಪಿಸಿದೆ. ಸಿಂಧೂ-ಗಂಗಾ-ಬ್ರಹ್ಮಪುತ್ರ ನದಿಗಳ ಮೆಕ್ಕಲು ಮಣ್ಣಿನಿಂದ ಮುಚ್ಚಲ್ಪಟ್ಟಿರುವುದರಿಂದ ಮೇಲುನೋಟಕ್ಕೆ ಇದು ವಿಸ್ತಾರ ಮೈದಾನದಂತೆ ಕಾಣಿಸುತ್ತದೆ. ಎಡ್ವರ್ಡ್ ಸೂಯೆಸ್ ಎಂಬ ಆಸ್ಟ್ರಿಯ ವಿಜ್ಞಾನಿ ಕಳೆದ ಶತಮಾನಾಂತ್ಯದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದ ಪ್ರಕಾರ ಮಧ್ಯೆ ಏಷ್ಯ-ಹಿಮಾಲಯ ಪ್ರದೇಶದಲ್ಲಿ ಪುರಾತನಕಾಲದಲ್ಲಿದ್ದ ಟೆತಿಸ್ ಸಮುದ್ರದಲ್ಲಿ ಶಿಲೆಗಳು ಒಳಒತ್ತಡದಿಂದ ಮೇಲೆದ್ದು ಉತ್ತರ ದಿಕ್ಕಿನಿಂದ ದಕ್ಷಿಣಕ್ಕೆ ಬಹಳ ಶಕ್ತಿಯುತವಾಗಿ ನೂಕಲ್ಪಟ್ಟಾಗ ಗಡುಸಾಗಿರುವ ಪರ್ಯಾಯಭಾಗ ಅಚಲವಾಗಿದ್ದುದರಿಂದ ಹಿಮಾಲಯ ತಪ್ಪಲಿನಲ್ಲಿ ನೆಲ ಕುಸಿದು ಮುಂಗಭೀರ ಉತ್ಪತ್ತಿಯಾಯಿತು. ಅನಂತರ 1915ರಲ್ಲಿ ಎಸ್. ಜಿ. ಬುರ್ರಾರ್ಡ್ ಎಂಬ ವಿಜ್ಞಾನಿ ತೂಗುಗುಂಡು ದಾರ ವಿಚಲನೆಗಳ ಆಧಾರದಿಂದ ತಿಳಿಸಿದ ಅಭಿಪ್ರಾಯದ ಪ್ರಕಾರ ಹಿಮಾಲಯಕ್ಕೂ ಪರ್ಯಾಯಭಾಗಕ್ಕೂ ಮಧ್ಯೆ ಎರಡು ಅಂಚುಗಳಲ್ಲೂ ಭಾರಿ ಶಿಲಾಪ್ರಸ್ತರಭಂಗವಾಗಿ ಸುಮಾರು 15,000 ಮೀ. ಆಳದ ಕಂದಕ ರೀತಿಯಲ್ಲಿ ಈ ಮುಂಗಭೀರ ಉತ್ಪತ್ತಿಯಾಯಿತು. ಆದರೆ ಈ ಅಭಿಪ್ರಾಯಕ್ಕೆ ಭಾರತದ ಪ್ರಮುಖ ಭೂವಿಜ್ಞಾನಿಗಳ ಮನ್ನಣೆ ದೊರಕಲಿಲ್ಲ. ಇತ್ತೀಚೆಗೆ ಸುಮಾರು 30 ವರ್ಷಗಳಿಂದ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ಅಯೋಗದವರು ನಡೆಸಿರುವ ಸಂಶೋಧನೆಗಳಿಂದ ಈ ಮುಂಗಭೀರದ ಆಳ 7,000-8,000ಮೀಗಳಿಗಿಂತ ಹೆಚ್ಚಾಗಿಲ್ಲವೆಂದೂ ಪರ್ಯಾಯದ ಉತ್ತರ ಅಂಚಿನಲ್ಲಿ ಎಲ್ಲೂ ಪ್ರಸ್ತರಭಂಗವಾಗಿರುವ ಸೂಚನೆ ಇಲ್ಲವೆಂದೂ ತಿಳಿದು ಬಂದಿದೆ. ಪರ್ಯಾಯದ ಶಿಲೆಗಳು ಮೆಕ್ಕಲಿನ ಕೆಳಗೆ ಉತ್ತರಕ್ಕೆ ಕೇವಲ 20 -30 ಯಷ್ಟು ಇಳಿಜಾರಾಗಿ ಪ್ರಸರಿಸಿ ಹಿಮಾಲಯ ಪಾದದ ಶಿವಾಲಿಕ್ ಬೆಟ್ಟಗಳ ದಕ್ಷಿಣ ಅಂಚಿನಲ್ಲಿ ಮಾತ್ರ ಆಳಕ್ಕೆ ಪ್ರಸ್ತರ ಭಂಗಗಳು ಇರುವುದರಿಂದ ತಳ ಒಂದೇ ಮಟ್ಟಸವಾಗಿರದೆ ಅನೇಕ ಏರುಪೇರುಗಳಿಂದ ಕೂಡಿದೆ. ಈ ತನಕ ಪರೀಕ್ಷೆಗಾಗಿ ಕೊರೆದು ನೋಡಿರುವ ಬಾವಿಗಳಲ್ಲಿ ಮೆಕ್ಕಲು ಮಣ್ಣಿನ ಕೆಳಗೆ ಶಿವಾಲಿಕ್ ಶಿಲೆಗಳೂ ವಿಂಧ್ಯಶಿಲೆಗಳೂ ಕೆಲವು ಸ್ಥಳಗಳಲ್ಲಿ ಗೊಂಡವಾನ ಶಿಲೆಗಳೂ ಇರುವುದು ಗೊತ್ತಾಗಿದೆ. ಇಲ್ಲಿಯ ತನಕ ಕೊರೆದಿರುವ ಬಾವಿಗಳಾವುವೂ 4,900 ಮೀ ಗಿಂತ ಕೆಳಗಿನ ಆಳಕ್ಕೆ ಹೋಗಿಲ್ಲವಾದ್ದರಿಂದ ಇನ್ನೂ ಹೆಚ್ಚಿನ ಆಳದಲ್ಲಿ ಯಾವ ಶಿಲೆಗಳಿವೆ ಎನ್ನುವುದು ಗೊತ್ತಿಲ್ಲ.

	ಈ ಮುಂಗಭೀರಕ್ಕೂ ಹಿಮಾಲಯ ಪರ್ವತಶ್ರೇಣಿಗೂ ಶಿಲಾವಿನ್ಯಾಸದಲ್ಲಿ ನಿಕಟ ಸಂಬಂಧವಿದೆಯೆಂದು ಅನೇಕ ಭೂವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಈ ಸಂಬಂಧ ಯಾವ ರೀತಿಯಲ್ಲಿ ಉತ್ಪತ್ತಿಯಾಯಿತೆಂಬುದು ಇನ್ನೂ ಖಚಿತವಾಗಿ ಗೊತ್ತಾಗಿಲ್ಲ.
(ಎಂ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ